ಸಂಶೋಧಕರು
ಎಂ.ಎಂ. ಕಲಬುರ್ಗಿ, 1938-2015

ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು, ಕರ್ನಾಟಕದ ಬಹು ಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರು. ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅಧ್ಯಯನದ ವಿಶಾಲವಾದ ಪರಿಪ್ರೇಕ್ಷ್ಯವಿದೆ. ಸೃಜನಶೀಲ ಸಾಹಿತ್ಯದಲ್ಲೂ ಆಸಕ್ತಿಯಿರುವ ಕಲಬುರ್ಗಿಯವರು ಎರಡು ನಾಟಕಗಳು ಮತ್ತು ಒಂದಿ ಕವನ ಸಂಕಲವನ್ನು ಪ್ರಕಟಿಸಿದ್ದಾರೆ.

ಕಲಬುರ್ಗಿಯವರು, ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲು ಗ್ರಾಮದವರು. ಅವರು ಹುಟ್ಟಿದ್ದು ಅದೇ ತಾಲ್ಲೂಕಿನ ಗುಬ್ಬೆವಾಡ ಎಂಬ ಹಳ್ಳಿಯಲ್ಲಿ. ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ.(1960) ಮತ್ತು ಎಂ..ಎ.(1962) ಪದವಿಗಳನ್ನು ಪ್ರಥಮ ದರ್ಜೆ, ಪ್ರಥಮ ಸ್ಥಾನದೊಂದಿಗೆ ಪಡೆದರು. 1968 ರಲ್ಲಿ, ಅವರು ಸಲ್ಲಿಸಿದ, ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಬಂತು. 1962 ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಕಲಬುರ್ಗಿಯವರು 1966 ರಲ್ಲಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಅಧ್ಯಾಪಕರಾಗಿ ನೇಮಕವಾದರು. ಅಲ್ಲಿ ಅನೇಕ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದರು. ಸುಮಾರು ಹತ್ತೊಂಬತ್ತು ವರ್ಷಗಳು ಪ್ರಾಧ್ಯಾಪಕರಾಗಿದ್ದ ಕಲಬರ್ಗಿಯವರು, ಒಟ್ಟಿನಲ್ಲಿ ಮೂವತ್ತೊಂಬತ್ತು ವರ್ಷಗಳು ಶಿಕ್ಷಕ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಅವರು ಆ ಅವಧಿಯಲ್ಲಿ ಅನೇಕ ಸಂಶೋಧನಯೋಜನೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. 1998-2001 ರ ಕಾಲಾವಧಿಯಲ್ಲಿ ಕಲಬುರ್ಗಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಅಲ್ಲಿಯೂ ಅನೇಕ ಮಹತ್ವದ ಯೋಜನೆಗಳನ್ನು ಆಗುಮಾಡಿದ ಕಲಬುರ್ಗಿಯವರು ನಿವೃತ್ತಿಯ ನಂತರವೂ ಸಂಶೋಧನಾ ಚಟುವಟಿಕೆಗಳಲ್ಲಿಯೇ ಮಗ್ನರಾಗಿದ್ದಾರೆ. ಕರ್ನಾಟಕ ಸರ್ಕಾರವು ಪ್ರಕಟಿಸಿದ ಹದಿನೈದು ಸಂಪುಟಗಳ ವಚನಸಾಹಿತ್ಯ ಸಂಪುಟ ಮಾಲೆಗೆ ಅವರು ಪ್ರಧಾನ ಸಂಪಾದಕರಾಗಿದ್ದರು. ಹಾಗೆಯೇ ಸಮಗ್ರ ಕೀರ್ತನ ಸಂಪುಟಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದರು.

ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಸಂಶೋಧನೆಯು ಕಲಬುರ್ಗಿಯವರ ಪ್ರಧಾನ ಆಸಕ್ತಿಯಾಗಿದೆ. ಅವರು ಎಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ ನಾನೂರಕ್ಕೂ ಹೆಚ್ಚು ಸಂಶೋಧನ ಲೀಖನಗಳನ್ನೂ ಪ್ರಕಟಿಸಿದ್ದಾರೆ. ಈ ಬರವಣಿಗೆಯ ವ್ಯಾಪ್ತಿ ಮತ್ತು ಆಳಗಳು ಗಮನೀಯವಾಗಿವೆ.ಈ ಕಿರು ಟಿಪ್ಪಣಿಯಲ್ಲಿ ಅವರ ಮುಖ್ಯವಾದ ಕೃತಿಗಳನ್ನು ಮಾತ್ರ ಪಟ್ಟಿಮಾಡಲು ಸಾಧ್ಯ.

  1. ಸಂಶೋಧನೆ:

ಅ. ಕವಿರಾಜಮಾರ್ಗ ಪರಿಸರದ ಕನ್ನಡಸಾಹಿತ್ಯ, 1973

ಆ. ಮಾರ್ಗ - ನಾಲ್ಕು ಸಂಪುಟಗಳು 1988-2004

ಇ. ಐತಿಹಾಸಿಕ, 1984

  1. ಶಾಸನಶಾಸ್ತ್ರ:

ಅ. ಶಾಸನ ವ್ಯಾಸಂಗ, ಭಾಗ 1 ಮತ್ತು ಭಾಗ 2, 1974, 1975

ಆ. ಶಾಸನ ವ್ಯಾಸಂಗ: ಸಮಾಧಿ, ಬಲಿದಾನ, ವೀರಮರಣ ಸ್ಮಾರಕಗಳು, 1980

ಇ. ಶಾಸನ ಸಂಪದ, 1968

ಈ. ಧಾರವಾಡ ಜಿಲ್ಲೆಯ ಶಾಸನಸೂಚಿ, 1975

  1. ವಿವಿಧ ಶೈಕ್ಷಣಿಕ ಶಿಸ್ತುಗಳನ್ನು ಕುರಿತ ಗ್ರಂಥಗಳು:

ಅ. ಕನ್ನಡ ಗ್ರಂಥಸಂಪಾದನಶಾಸ್ತ್ರ, 1972

ಆ. ಕನ್ನಡ ಹಸ್ತಪ್ರತಿಶಾಸ್ತ್ರ

ಇ. ಕನ್ನಡ ಸಂಶೋಧನಶಾಸ್ತ್ರ

ಈ. ಕನ್ನಡ ಸ್ಥಳನಾಮವಿಜ್ಞಾನ

  1. ಗ್ರಂಥಸಂಪಾದನೆ: (ಕಲಬುರ್ಗಿಯವರು 30 ಕ್ಕೂ ಹೆಚ್ಚು ಪ್ರಾಚೀನ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ)

ಅ. ಶಿವಯೋಗ ಪ್ರದೀಪಿಕಾ, 1976

ಆ. ಕೊಂಡಗುಳಿ ಕೇಶಿರಾಜನ ಕೃತಿಗಳು, 1978

ಇ. ಬಸವಣ್ಣನ ಟೀಕಿನ ವಚನಗಳು. 1978

ಈ. ಸಿರುಮನಾಯಕನ ಸಾಂಗತ್ಯ, 1983.

  1. ಜಾನಪದ

ಅ. ಜಾನಪದ ಮಾರ್ಗ, 1995

ಆ. ಉತ್ತರ ಕರ್ನಾಟಕದ ಜನಪದ ಸಾಹಿತ್ಯ, 1978

  1. ಸೃಜನಶೀಲ ಬರೆಹಗಳು

ಅ. ನೀರು ನೀರಡಿಸಿತ್ತು (ಕವನಗಳು)

ಆ. ಕೆಟ್ಟಿತ್ತು ಕಲ್ಯಾಣ, (ನಾಟಕ)

 

(ಕಲಬುರ್ಗಿಯವರ ಕೃತಿಗಳ ಸಮಗ್ರ ಪಟ್ಟಿಗಾಗಿ ಈ ಕೆಳಗೆ ಸೂಚಿಸಿರುವ ಅವರನ್ನು ಕುರಿತ ವೆಬ್ ಸೈಟ್ಗೆ ಹೋಗಬಹುದು)

 

ಮೇಲೆ ಹಸರಿಸಿರುವ ಪ್ರಕಟಣೆಗಳಲ್ಲಿ ಮಾರ್ಗ ಎನ್ನುವ ಹೆಸರಿನಲ್ಲಿ ಪ್ರಕಟವಾಗಿರುವ ನಾಲ್ಕು ಸಂಪುಟಗಳು, ಕರ್ನಾಟಕದ ಸಂಸ್ಕೃತಿಯನ್ನು ಕುರಿತ ಅನೇಕ ಸಂಶೋಧನ ಲೇಖನಗಳನ್ನು ಒಳಗೊಂಡಿವೆ. ಕಲಬುರ್ಗಿಯವರಲ್ಲಿ ಉತ್ತರ ಕರ್ನಾಟಕದ ಹಿರಿಯ ವಿದ್ವಾಂಸರ ವಿಶಿಷ್ಟ ಲಕ್ಷಣಗಳು ಮತ್ತು ಹಳೆಯ ಮೈಸೂರಿನ ಕಡೆಯ ವಿದ್ವತ್ ಪರಂಪರೆಯ ಅನನ್ಯ ಲಕ್ಷಣಗಳ ಸಂಯೋಜನೆಯನ್ನು ಕಾಣಬಹುದು. ತನ್ನ ಸಂಶೋಧನೆಯ ಫಲಿತಗಳ ನಿಕರತೆಯ ಬಗ್ಗೆ ನಂಬಿಕೆಯಿದ್ದಾಗ, ಅವರು ವಿವಾದಗಳನ್ನು ಹುಟ್ಟುಹಾಕಲು ಎಂದಿಗೂ ಹಿಂಜರಿದಿಲ್ಲ. ಅವರು ತಮ್ಮ ಆಕರಗಳನ್ನು ಖಚಿತಪಡಿಸಿಕೊಂಡಿರುತ್ತಾರೆ ಮತ್ತು ಮಹತ್ವದ ಒಳನೋಟಗಳನ್ನು ನೀಡುತ್ತಾರೆ. ಆಕರಗಳ ಶೋಧನೆಯಲ್ಲಿ ಹಲವು ದೇಶಗಳನ್ನು ಸುತ್ತಿರುವ ಕಲಬುರ್ಗಿಯವರು ಅವುಗಳನ್ನು ವಿವೇಚನೆಯಿಂದ ಬಳಸಿಕೊಂಡಿದ್ದಾರೆ.

ಕಲಬುರ್ಗಿಯವರು ತಮ್ಮ ಸಾಧನೆಗಾಗಿ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರಪ್ರಶಸ್ತಿ, ಪಂಪ ಪ್ರಶಸ್ತಿ, ಚಿದಾನಂದ ಪ್ರಶಸ್ತಿ ಮತ್ತು ವಿಶ್ವಮಾನವ ಪ್ರಶಸ್ತಿಗಳು ಅವುಗಳಲ್ಲಿ ಕೆಲವು. ಅವರ ಮಾರ್ಗ-4 ಎಂಬ ಕೃತಿಯು ಕೇಂದ್ರಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದೆ. ಅವರು ಬರೆದಿರುವ ಆರು ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನಗಳನ್ನು ಪಡೆದಿವೆ. ಕಲಬುರ್ಗಿ-60 ಮತ್ತು ಮಹಾಮಾರ್ಗಗಳು ಈ ವಿದ್ವಾಂಸರಿಗೆ ಸಲ್ಲಿಸಿರುವ ಅಭಿನಂದನ ಗ್ರಂಥಗಳಲ್ಲಿ ಮುಖ್ಯವಾದವು.

ಮುಖಪುಟ / ಸಂಶೋಧಕರು